ಆಂಟ್‍ಸನ್‍ಗ್ರೂಬರ್, ಲೂಟ್‍ವಿಕ್
(1839 -89) ಆಸ್ಟ್ರಿಯದ ನಾಟಕಕಾರ. ರಂಗಮಂದಿರದ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯನ್ನು ಹೊಂದಿದ್ದು ನೂತನ ಸೃಷ್ಟಿಯಲ್ಲಿ ಶ್ರೇಷ್ಠವಾದ ಶಕ್ತಿಯನ್ನು ತೋರಿದ್ದಾನೆ. ನಾಟಕಗಳನ್ನಲ್ಲದೆ ಬೇಸಾಯಗಾರರ ಜೀವನದ ಬಗ್ಗೆ ಅನೇಕ ಕಥೆಗಳನ್ನೂ ಬರೆದಿದ್ದಾನೆ. ರೈತನನ್ನು ಆದರ್ಶಮಾನವನ್ನಾಗಿ ಚಿತ್ರಿಸದೆ ಅವನ ಬಾಳಿನ ನೈಜಚಿತ್ರವನ್ನು ನೀಡಿದ್ದಾರೆ. ಜರ್ಮನ್ ಸಾಹಿತ್ಯದಲ್ಲಿ ಆ ಬಳಿಕ ರೂಪುಗೊಂಡ ವಾಸ್ತವತೆಗೆ ಈತನನ್ನು ಒಂದು ದೃಷ್ಟಿಯಿಂದ ಮೊದಲಿಗನೆನ್ನಬಹುದು. ಇವನ ಕೃತಿಗಳು ಜಾನಪದ ಮೂಲದಿಂದ ಹೊಮ್ಮಿದುವು.

ನಾಟಕಗಳಲ್ಲಿ ಬರುವ ಎಲ್ಲ ಹಳ್ಳಿಗಳ ಪಾತ್ರಗಳೂ ಪ್ರಾಮಾಣಿಕ ಚಿತ್ರಗಳು. ಆಗಂತುಕವಾದ ಯಾವ ಭಾವ, ಭಾಷೆಗಳನ್ನೂ ನಾಟಕಕಾರ ಅವರ ಮೇಲೆ ಹೊರಿಸಿಲ್ಲ. ಗ್ರಾಮಗಳ ಗುಡಿಸಲುಗಳ ಸುಖ ದುಃಖಗಳನ್ನು ಉನ್ನತ ಜೀವನದ ಆನಂದ ದುರಂತಗಳ ಮಟ್ಟಕ್ಕೆ ಏರಿಸಿರುವುದು ನಾಟಕಕಾರನ ಹೆಚ್ಚಳ. ಇವನ ಶ್ರೇಷ್ಠ ನಾಟಕಗಳಲ್ಲಿ ಹರಿತವಾದ ಮಾನಸಿಕ ಅವಲೋಕನ ಮತ್ತು ವಾಸ್ತವಿಕತೆಗಳನ್ನು ಕಾಣಬಹುದು. ನೀತಿಬೋಧಕ ಉದ್ದೇಶವೂ ಉಂಟು. ಡರ್ ಸ್ಟರ್ನ್‍ಸ್ವೀನ್ ಹಾಫ್(1885) ಇವನ ಸ್ವೋಪಜ್ಞತೆಯನ್ನು ಉತ್ತಮವಾಗಿ ತೋರಿಸುವ ಕೃತಿ. ದಾಸ್ ವರ್ಟೆಗೆಬೊ ಎಂಬುದು ಇವನ ನೈಸರ್ಗಿಕವಾದುದೆಂದು ಪ್ರಸಿದ್ಧವಾಗಿದೆ.

(ಜಿ.ವಿ.ಎಸ್.; ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ